Top News

ಕುಡಿಯುವ ನೀರಿನ 3 ನೇ ಹಂತದ ಯೋಜನೆಗೆ ಅನುಮೋದನೆ ನೀಡಿ-ನಿಮ್ಮ ಹೆಸರು ಅಜರಾಮರ : ಸಚಿವ ಎಂ.ಬಿ. ಪಾಟೀಲ

ವಿಜಯಪುರ : ಈ ಹಿಂದೆ ತಮ್ಮ ತಂದೆ ಸಿದ್ದರಾಮಯ್ಯ ಸಾಹೇಬರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆರೆ ತುಂಬುವ ಯೋಜನೆ ಸೇರಿದಂತೆ ಅನೇಕ ನೀರಾವರಿ ಯೋಜನೆಗಳಿಗೆ ದೊಡ್ಡ ಕೊಡುಗೆ ನೀಡಿದರು, ಈಗ ನೀವು ಸಹ ನಿಮ್ಮ ತಂದೆಯ ಹಾದಿಯಂತೆಯೇ ವಿಜಯಪುರ ನಗರದ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದಂತೆ 3ನೇ ಹಂತದ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲರು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿಕೊಂಡರು.

ರವಿವಾರ ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಗರಾಭಿವೃದ್ದಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿಸಚಿವ ಡಾ.ಎಂ.ಬಿ. ಪಾಟೀಲರು, ಈ ಹಿಂದೆ ನೀರಾವರಿ ಯೋಜನೆಗಳಿಗೆ  ಅಂದಿನ ಮುಖ್ಯಮಂತ್ರಿ ಹಾಗೂ ನಿಮ್ಮ ತಂದೆಯವರಾದ  ಸಿದ್ಧರಾಮಯ್ಯ ಸಾಹೇಬರು ನೀಡಿದ ಸಹಕಾರದಿಂದ ಅವರ ಹೆಸರು ಜಿಲ್ಲೆಯಲ್ಲಿ ಅಜರಾಮರವಾಗುವಂತೆ ಮಾಡಿದ್ದಾರೆ, ಹಾಗೆಯೇ ಕುಡಿಯುವ ನೀರಿನ ಯೋಜನೆಯ 3ನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು  ಆದೇಶ ನೀಡಿ, ಈ ಯೋಜನೆ ಪೂರ್ಣಗೊಳಿಸಿ,  ಇದರಿಂದ ನಿಮ್ಮ ಹೆಸರು ಕೂಡ ಜಿಲ್ಲೆಯಲ್ಲಿ ಅಜರಾಮರವಾಗಿ ಉಳಿಯುತ್ತದೆ ಎಂದು ಸಭೆಯಲ್ಲಿ ಬೇಡಿಕೆ ಇರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಯತಿಂದ್ರ ಸಿದ್ಧರಾಮಯ್ಯ  ವಿಜಯಪುರದಲ್ಲಿ ಕುಡಿಯು ನೀರಿನ ಸಮಸ್ಯೆ ಪರಿಹರಿಸಲು ಕಾಮಗಾರಿ ಕೈಗೊಳ್ಳಬೇಕಿದೆ, ವಿಜಯಪುರ  ಜನಸಂಖ್ಯೆ ಜಾಸ್ತಿ ಆಗಿದೆ, ನೀರಿನ ಮೂಲ ಚೆನ್ನಾಗಿದೆ, ಸಮರ್ಪಕವಾಗಿ ಕುಡಿಯುವ ನೀರಿನ  ಕಾಮಗಾರಿಗಳನ್ನು ತೆಗೆದುಕೊಂಡು ಪೂರ್ಣಗೊಳಿಸಿದರೆ ಮನೆ ಮನೆಗೆ ನೀರನ್ನು ತಲುಪಿಸಬಹುದು ಹೀಗಾಗಿ ಸಚಿವರೆ ಖುದ್ದಾಗಿ ಈ ಬೇಡಿಕೆ ಇಟ್ಟಿರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ಅನುದಾನ ಲಭ್ಯತೆ ಆಧರಿಸಿ ಆದಷ್ಟು ಬೇಗ ಈ ಕುಡಿಯು ನೀರಿನ ಕಾಮಗಾರಿಗೆ ಅನುದಾನ ನೀಡಲಾಗುವುದು ಎಂದು ಸಕಾರಾತ್ಮಕವಾಗಿ ಸ್ಪಂದಿಸಿದರು.

ಗುಂಟಾ ಪ್ಲಾಟಗೆ ಡಬಲ್ ಟ್ಯಾಕ್ಸ ತೆಗೆದುಕೊಳ್ಳಬಾರದು ಸಿಂಗಲ್ ಟ್ಯಾಕ್ಸ್ ಮಾತ್ರ ತೆಗೆದುಕೊಳ್ಳಬೇಕು ಎಂದು ಸರ್ಕಾರದ ಆದೇಶ ಇದೆ ಹೀಗಾಗಿ ಸಿಂಗಲ್ ಟ್ಯಾಕ್ಸ್ ಮಾತ್ರ ತೆಗೆದುಕೊಳ್ಳಬೇಕು. ಈಗಾಗಲೇ ಗುಂಟಾ ಪ್ಲಾಟ್ ಗಳನ್ನು ಖರೀದಿ ಮಾಡಿ ಮನೆ ಕಟ್ಟಿರುವವರಿಗೆ ಕಾನೂನು ಬಾಹಿರ ಎಂದು  ಪರಿಗಣಿಸದೇ ಮಾನವಿಯತೆ ದೃಷ್ಟಿಯಿಂದ ಅವರಿಗೆ ಲೀಗಲ್ ಮಾಡಬೇಕು ಎನ್ನುವ ಚಿಂತನೆ ಇದೆ ಅದನ್ನು ಪರಿಶೀಲನೆ ನಡೆಸಲಾಗುವುದು ಎಂದರು. 

ಅಹವಾಲುಗಳ ಸುರಿಮಳೆ :ಸಭೆಯಲ್ಲಿ ಹಲವಾರು ಪಾಲಿಕೆ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಹ ಸಚಿವರಿಗೆ ಅಹವಾಲು ಸಲ್ಲಿಸಿದರು.

ಗುಂಟಾ ಆಸ್ತಿ ಎಂಟ್ರಿ ಸ್ಥಗಿತವಾಗಿದೆ, ಅದನ್ನ ಆರಂಭಿಸಬೇಕು ಸಾರ್ವಜನಿಕ ಹಿತ ದೃಷ್ಡಿಯಿಂದ ಗುಂಟಾ ಎಂಟ್ರಿ ಆರಂಭಿಸಬೇಕು, ಬಡವರಿಗೆ ಅನುಕೂಲವಾಗಲು ಇದನ್ನು ಆರಂಭಿಸಿ ಎಂದು ಪಾಲಿಕೆ  ಸದಸ್ಯ ರಾಜು ಚವ್ಹಾಣ ಸಚಿವರ ಗಮನಕ್ಕೆ ತಂದರು ಆಗ ಅದಕ್ಕೆ ಧ್ವನಿಗೂಡಿಸಿದ ಪ್ರೇಮಾನಂದ ಬಿರಾದಾರ ನಾವು ಗುಂಟಾ ಪ್ಲಾಟ್ ಗೆ ಎಲ್ಲಸೌಲಭ್ಯ ನೀಡುತ್ತಿದ್ದೇವೆ. ನಾವು ಡಬಲ್ ಟ್ಯಾಕ್ಸ್ ಕೇಳುತ್ತಿರುವುದರಿಂದ   ಅವರು ಟ್ಯಾಕ್ಸ್ ತುಂಬಲ್ಲ ಅದನ್ನ ನಾವು ಬಗೆ ಹರಿಸಿದರೆ ಪಾಲಿಕೆಗೂ ಆದಾಯ ಬರುತ್ತದೆ ಎಂದರು. ಇದಕ್ಕೆ ಸಚಿವ ಯತೀಂದ್ರ ಪ್ರತಿಕ್ರಿಯಿಸಿ ಸರ್ಕಾರದಿಂದ ಗೈಡ್ಲೈನ್ಸ್ ಬರಬೇಕು ಬಂದಮೇಲ ಬಿ ಖಾತಾ ಬರುತ್ತದೆ, ಹೀಗಾಗಿ ಸರ್ಕಾರದ ಆದೇಶ ಬರುವವರೆಗೂ ಕಾಯಬೇಕು ಎಂದು ಸ್ಪಷ್ಟನೆ ನೀಡಿದರು.

ಈ ವಿಷಯವಾಗಿ ಮಾನವೀಯತೆ ಚಿಂತನೆ ಆಧರಿಸಿ ಬೇಡಿಕೆ ಇರಿಸಿದ ಸಚಿವ ಡಾ.ಎಂ.ಬಿ. ಪಾಟೀಲರು, ಗುಂಟಾ ಪ್ಲಾಟ್ ಪಾಪ ಬಡವರು ತಗೊಂಡಿದ್ದಾರೆ, ಅವರಿಗೆ ಸಹಕರಿಸುವುದು ನಮ್ಮಕರ್ತವ್ಯ, ಅದಕ್ಕೆ ಎಲ್ಲ ರೀತಿಯಲ್ಲಿ ಸಹಕರಿಸೋಣ ಎಂದರು. ಆದರೆ ಗುಂಟಾ ಪ್ಲಾಟ್ ಹಾಕಿ ಮಾರಾಟ ಮಾಡುವವರ ಮೇಲೆ ಕ್ರಮ ನಡೆಯಬೇಕು ಎಂದರು.

ನಂತರ ಕಾಂಗ್ರೆಸ್ ಯುವ ಮುಖಂಡ ರಫೀಕ್ ಅಹ್ಮದ್ ಕಾಣೆ ಮಾತನಾಡಿ, ಪಾಲಿಕೆಗೆ ಅನುದಾನ ಬಂದಿಲ್ಲ, ಪಾಲಿಕೆ ಸದಸ್ಯರಿಗೆ ಅನುದಾನ ಬಂದಿಲ್ಲ, ಜನರು ನಿತ್ಯ ಪ್ರಶ್ನೆ ಮಾಡುತ್ತಾರೆ, ಪಾಲಿಕೆ ಸದಸ್ಯರಿಗೆ ಅನುದಾನ ಒದಗಿಸಿ, ಆಗ ವಿವಿಧ ಅಭಿವೃದ್ಧಿ ಕಾರ್ಯ ಸಾಧ್ಯವಾಗುತ್ತದೆ ಎಂದರು. ಅಲ್ಪಸಂಖ್ಯಾತ ಬಾಹುಳ್ಯವಿರುವ ಬಡಾವಣೆಯಲ್ಲಿ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ದೂರಿದರು.

ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಸಚಿವ ಡಾ.ಎಂ.ಬಿ. ಪಾಟೀಲರು, ಈ ಹಿಂದೆ ಅಲ್ಪಸಂಖ್ಯಾತ ಬಾಹುಳ್ಯವಿರುವ  ವಾರ್ಡ್ ಗೆ ತಾರತಮ್ಯ ಆಗಿರುವುದು ಸತ್ಯ, ಆದರೆ ಈಗ ಸರಿಪಡಿಸಿದ್ದೇವೆ, ಎಲ್ಲ ವಾರ್ಡ್ಗಳಲ್ಲೂ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.

Post a Comment

ನವೀನ ಹಳೆಯದು