ವಿಜಯಪುರ : 2020-21 ನೇ ವರ್ಷದಲ್ಲಿ ಆರಂಭಗೊಂಡ ಕಾಮಗಾರಿಗಳೇ ಪೂರ್ಣಗೊಳ್ಳದಿರುವುದು, 2011 ಜನಗಣತಿ ಆಧರಿಸಿ ನೀರು ಪೂರೈಕೆ ಯೋಜನೆ ಚಾಲ್ತಿಯಲ್ಲಿರುವುದು, ಆಸ್ತಿ ತೆರಿಗೆ ವಸೂಲಾತಿ ಪ್ರಮಾಣ ಕೇವಲ ಶೇ.54 ರಷ್ಟಿರುವುದು ಸೇರಿದಂತೆ ವಿಷಯಗಳ ಬಗ್ಗೆ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ ತೀವ್ರ ಅಸಮಾಧಾನ ಹೊರಹಾಕಿದರು.
ವಿಜಯಪುರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಈ ವಿಷಯದಲ್ಲಿ ಆಗುತ್ತಿರುವ ನಿರ್ಲಕ್ಷ್ಯದ ಕುರಿತು ತೀವ್ರ ಬೇಸರ ಹೊರಹಾಕಿದರು.
ಅತ್ತ ಆಸ್ತಿ ತೆರಿಗೆ ಸಹ ವಸೂಲಾಗಿಲ್ಲ, ಕಳೆದ ಹಲವಾರು ವರ್ಷಗಳಿಂದ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿ ಪೂರ್ಣಗೊಂಡಿಲ್ಲ ಎಂದರೆ ಹೇಗೆ ಎಂದು ಅಧಿಕಾರಿಗಳ ಕಾರ್ಯ ವೈಖರಿಗೆ ತರಾಟೆಗೆ ತೆಗೆದುಕೊಂಡರು.
ಆಸ್ತಿ ತೆರಿಗೆ ವಸೂಲಾತಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದು ತೋರುತ್ತದೆ, ಶೇ.54 ರಷ್ಟು ಮಾತ್ರ ಆಸ್ತಿ ತೆರಿಗೆ ವಸೂಲಾಗಿದೆ ಎಂದರೆ ಏನರ್ಥ? ಇನ್ನೂ ಶೇ.46 ರಷ್ಟು ಪ್ರಮಾಣದಲ್ಲಿ ತೆರಿಗೆ ವಸೂಲಾಗಬೇಕಿದೆ, ಹೀಗಾಗಿ ಮಾರ್ಚ್ ತಿಂಗಳಲ್ಲಿ ಶೇ.100 ರಷ್ಟು ತೆರಿಗೆ ಸಂಗ್ರಹವಾಗಬೇಕು ಎಂದು ಕಟ್ಟುನಿಟ್ಟಾದ ಸೂಚನೆ ನೀಡಿದ ಅವರು, ತೆರಿಗೆ ಪಾವತಿಸಲು ವಿಳಂಬ ಮಾಡುವವರ ಮೇಲೆ ದಂಡ ವಿಧಿಸಿ ಎಂದು ತಾಕೀತು ಮಾಡಿದರು.
ನೀರಿನ ಶುಲ್ಕ ವಿಷಯದಲ್ಲಿ ಉದಾಸೀನತೆಯೇ? ಶೇ. 15ರಷ್ಟು ಮಾತ್ರ ಶುಲ್ಕ ವಸೂಲಿ ಮಾಡಲಾಗಿದೆ ಇನ್ನು 4670.14 ಲಕ್ಷ ದಷ್ಟು ಶುಲ್ಕ ವಸೂಲಿ ಆಗಬೇಕಾಗಿದೆ, ಇದನ್ನು ವಸೂಲಿ ಮಾಡಿ ಎಂದರು.
ಕುಡಿಯುವ ನೀರಿನ ಪೂರೈಕೆ ಯೋಜನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಪಾಲಿಕೆ ಆಯುಕ್ತರು 2011 ಜನಸಂಖ್ಯೆ ಆಧರಿಸಿ ಕುಡಿಯುವ ನೀರು ಪೂರೈಕೆ ಯೋಜನೆ ಕುರಿತು ವಿವರಣೆ ನೀಡಲು ಅಣಿಯಾದಾಗ ಅಸಮಾಧಾನಗೊಂಡ ಡಾ.ಯತೀಂದ್ರ, 2011 ರ ಜನಗಣತಿ ಆಧರಿಸಿ ನೀರು ಪೂರೈಕೆ ಯೋಜನೆ ಮುಂದುವರೆಸಿದರೆ ಹೇಗೆ? ಜನಸಂಖ್ಯೆ ಹೆಚ್ಚಾಗಿರುವುದನ್ನು ಆಧರಿಸಿ ನೀರಿನ ಸಂಗ್ರಹ, ಪೂರೈಕೆ ಹೆಚ್ಚಿಸಿ, ಲಿಕೇಜ್ ಮೊದಲಾದ ತಾಂತ್ರಿಕ ಸಮಸ್ಯೆ ನಿವಾರಣೆ ಮಾಡಿ ಶೇ.100 ರಷ್ಟು ಪ್ರಮಾಣದಲ್ಲಿ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಿ ಎಂದು ತಾಕೀತು ಮಾಡಿದರು.
ಕುಡಿಯುವ ನೀರು ಅಷ್ಟೇ ಅಲ್ಲ ಘನತ್ಯಾಜ್ಯ ನಿರ್ವಹಣೆ ವಿಷಯವಾಗಿಯೂ ಹಳೆಯ ಸೆನ್ಸೆಸ್ ಆಧರಿಸಿ ಕಾರ್ಯಯೋಜನೆ ರೂಪಿಸಿದ ಬಗ್ಗೆಯೂ ಆಕ್ಷೇಪಿಸಿದ ಅವರು ಮುಂದಿನ 10 ವರ್ಷದ ಜನಸಂಖ್ಯೆ ಆಧರಿಸಿ ಘನತ್ಯಾಜ್ಯ ನಿರ್ವಹಣಾ ಪರಿಷ್ಕೃತ ಯೋಜನೆ ರೂಪಿಸಿ ಎಂದು ಸೂಚಿಸಿದರು.
ಘನತ್ಯಾಜ್ಯ ಸೇರಿದಂತೆ ಎಲ್ಲ ಪ್ರಕಾರದ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ ಎಂದರು.
2021-22 ರಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳೇ ಬಾಕಿ ಇರುವುದ ಬಗ್ಗೆ ಗರಂ ಆದ ಸಚಿವರು, ಅನೇಕ ವರುಷ ಕಳೆದರೂ ಸಹ ಈ ಕಾಮಗಾರಿ ಇನ್ನು ಬಾಕಿ ಇದ್ದರೆ ಹೇಗೆ? ಇಷ್ಟು ವರ್ಷವಾದರು ಬಾಕಿ ಇರಿಸಿಕೊಳ್ಳುವುದು ಬೇಜಾಬ್ದಾರಿ ಅಲ್ಲವೇ? ಕೂಡಲೇ ಈ ವಿಳಂಬವಾಗಿರುವ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಿ ಎಂದರು.
ನೀವು ಏನು ಮಾಡುತ್ತಿದ್ದೀರಾ? ನಗರದ ರಸ್ತೆ ಹಾಳಾಗಿ ಹೋಗಿವೆ ನೀವು ಏನು ಮಾಡುತ್ತಿದ್ದೀರಾ ಎಂದು ಸಚಿವ ಡಾ.ಯತೀಂದ್ರ ಖಾರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸ್ಪಷ್ಟೀಕರಣ ನೀಡಿದ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಎರಡು ವರ್ಷದಿಂದ ಮಳೆ ಜಾಸ್ತಿ ಆಗಿರುವುದರಿಂದ ರಸ್ತೆ ಹಾಳಾಗಿವೆ ಅವುಗಳನ್ನ 150 ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಆಗ ಸಚಿವ ನೀವು ಮಳೆಗಾಲ ಬರುವ ಮೊದಲೆ ಪ್ಲ್ಯಾನ್ ಹಾಕಿಕೊಂಡು ರಸ್ತೆಗಳನ್ನ ನಿರ್ಮಿಸಬೇಕಾಗಿತ್ತಲ್ಲವೇ? ಇನ್ನಾದರೂ ರಸ್ತೆ ಹಾಳಾಗದಂತೆ ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಎಂದರು.
ಇ-ಆಸ್ತಿ ನೊಂದಣಿಯಲ್ಲಿ ಎಲ್ಲಿಯೂ ಶೇ.50 ಕ್ಕಿಂತ ಹೆಚ್ಚಿಗೆ ಆಗಿಲ್ಲ ನಿಮ್ಮಲ್ಲಿಯೂ ಆಗಿಲ್ಲ, ಕೆಲವೊಂದು ಕಡೆ ತಪ್ಪು ನಡೆಯುತ್ತಿವೆ, ಈ ಲೋಪಗಳು ನಿಮ್ಮಲ್ಲಿ ನಡೆಯಬಾರದು ಇದರ ಬಗ್ಗೆ ಮುತವರ್ಜಿ ವಹಿಸಿ, ಇ-ಸ್ವತ್ತು ಅಪ್ಲೋಡ್ ಮಾಡುವಾಗ ಅರ್ಜಿದಾರನ ಗಮನಕ್ಕೆ ತನ್ನಿ ಎಂದರು.
ಮಳೆಗಾಲ ಹಿನ್ನೆಲೆಯಲ್ಲಿ ಓವರ್ ಹೆಡ್ ಟ್ಯಾಂಕ್ ಕಲುಷಿತವಾಗುತ್ತಿದ್ದು, ಕೂಡಲೇ ಅವುಗಳನ್ನು ವ್ಯವಸ್ಥಿತವಾಗಿ ಸ್ವಚ್ಚಗೊಳಿಸಿ ಎಂದರು.

ಕಾಮೆಂಟ್ ಪೋಸ್ಟ್ ಮಾಡಿ