ವಿಜಯಪುರ : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ಧುರೀಣ, ಬೇರು ಮಟ್ಟದ ಕಾರ್ಯಕರ್ತ ಆಫ್ತಾಬ್ ಖಾದ್ರಿ ಅವರಿಗೆ ಪ್ರಾತಿನಿಧ್ಯ ನೀಡಬೇಕು ಎಂಬ ಕೂಗು ಕೇಳಿ ಬಂದಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಎಐಸಿಸಿ ವೀಕ್ಷಕ, ಮಧ್ಯ ಪ್ರದೇಶದ ಮಾಜಿ ಸಚಿವ, ಹಾಲಿ ಶಾಸಕ ಸಚಿನ್ ಯಾದವ್ ಅವರ ಮುಂದೆಯೂ ಸಹ ವಿಷಯ ಬಲವಾಗಿ ಪ್ರತಿಪಾದನೆಯಾಗಿದೆ.
ಇಲ್ಲಿಯವರೆಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತ ಮುಸ್ಲಿಂ ಬಾಂಧವರಿಗೆ ದೊರಕಿಲ್ಲ ಎನ್ನುವ ವಿಷಯ ಸಹ ಗಮನಕ್ಕೆ ಬಂದಿದ್ದು, ಹಲವಾರು ಮುಖಂಡರು ಸಹ ಅಲ್ಪಸಂಖ್ಯಾತ ಮುಸ್ಲಿಂ ಸಮಾಜಕ್ಕೆ ನೀಡಬೇಕು ಎಂಬ ಭಾವನೆ ವ್ಯಕ್ತವಾಗಿದ್ದು, ಆಪ್ತಾಬ್ ಖಾದ್ರಿ ಅವರಿಗೆ ಈ ಬಾರಿ ಜಿಲ್ಲಾ ಕಾಂಗ್ರೆಸ್ ಸಾರಥ್ಯ ವಹಿಸುವ ಅಭಿಪ್ರಾಯ ಅನೇಕ ಕಾರ್ಯಕರ್ತರ ವಲಯದಿಂದ ವೀಕ್ಷಕರ ಮುಂದೆ ಪ್ರಸ್ತಾಪವಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದ ಕಟ್ಟಾ ಕಾರ್ಯಕರ್ತರಾಗಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ, ವಿವಿಧ ಸರ್ಕಾರಿ ಹುದ್ದೆಗಳಿಗೆ ನಾಮನಿರ್ದೇಶಿತರಾಗಿ ಕಾರ್ಯನಿರ್ವಹಿಸಿದ್ದು, ಯಾವ ಚುನಾವಣೆಯೇ ಇರಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಮುಂಚೂಣಿಯಲ್ಲಿ ನಿಂತು ದುಡಿಯುವುದುಂಟು, ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯ ನಿರ್ಮಾಣದಲ್ಲಿಯೂ ಅವರ ಪಾತ್ರ ಪ್ರಮುಖವಾಗಿದೆ, ಪಕ್ಷ ಸಂಘಟನೆ, ಸದಸ್ಯತ್ವ ಅಭಿಯಾನ ಹೀಗೆ ಪಕ್ಷದ ಕಾರ್ಯ ಚಟುವಟಿಕೆಗಳಿಗೆ ಸದಾ ಮುಂಚೂಣಿ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಫಲಾಪೇಕ್ಷೆ ಇಲ್ಲದೇ ದುಡಿಯವ ಇವರಿಗೆ ಅವಕಾಶ ದೊರಕಿದರೆ ಪಕ್ಷಕ್ಕೆ ಇನ್ನಷ್ಟೂ ಬಲ ಬರಲಿದ್ದು, ಪಕ್ಷದ ಕಾರ್ಯಕರ್ತರಿಗೂ ಸಹ ಹೊಸ ಉತ್ಸಾಹ ಬರಲಿದೆ ಎಂಬ ಅಭಿಪ್ರಾಯ ವೀಕ್ಷಕರ ಮುಂದೆ ವ್ಯಕ್ತವಾಗಿದೆ.
ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ ವತಿಯಿಂದ ಅಹ್ಮದಾಬಾದ್ ನಲ್ಲಿ ನಡೆದ ಅಧಿವೇಶನದ ನಿರ್ಣಯದ ಅನ್ವಯ ದೇಶದ ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪಕ್ಷ ಸಂಘಟನಾ ಸೃಜನ ಅಭಿಯಾನದ ಮೂಲಕ ಆಯ್ಕೆ ಮಾಡಬೇಕು ಎಂಬುದಾಗಿದೆ. ಅದರಲ್ಲೂ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಹಾಗೂ ಬೇರು ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡುವ ಮಹತ್ತರ ನಿರ್ಣಯ ಸ್ವೀಕರಿಸಲಾಗಿದೆ. ಈ ನಿರ್ಣಯದನ್ವಯ 01-08-2026 ರಿಂದ ಪ್ರತಿ ಜಿಲ್ಲೆಗೆ ಓರ್ವ ಎಐಸಿಸಿ ವೀಕ್ಷಕ ಹಾಗೂ ನಾಲ್ವರು ಕೆಪಿಸಿಸಿ ವೀಕ್ಷಕರನ್ನು ನೇಮಿಸಿ ಎಐಸಿಸಿ ಅರ್ಜಿ ನಮೂನೆಯಲ್ಲಿ ಪಕ್ಷದ ಪ್ರಮುಖ, ನಿಷ್ಠಾವಂತ ಕಾರ್ಯಕರ್ತರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ವಿಜಯಪುರಕ್ಕೂ ಸಹ ಮಧ್ಯಪ್ರದೇಶದ ಮಾಜಿ ಕೃಷಿ ಸಚಿವ ಹಾಗೂ ಹಾಲಿ ಶಾಸಕರಾದ ಶ್ರೀ ಸಚೀನ್ ಯಾದವ್ ಅವರನ್ನು ಎಐಸಿಸಿ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಅವರು ದಿನಾಂಕ 03-08-2026 ರಂದು ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ದಿನಾಂಕ ೬ ರವರೆಗೆ ಈ ಅಭಿಯಾನದ ಕಾರ್ಯ ಚಟುವಟಿಕೆಗಳನ್ನು ಕೈಗೊಂಡು ಅದರ ಭಾಗವಾಗಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ, ಆಕಾಂಕ್ಷಿಗಳಿಂದ ಅರ್ಜಿ ನಮೂನೆ ಸಂಗ್ರಹಿಸುವುದು ಸೇರಿದಂತೆ ವಿವಿಧ ಪ್ರಕ್ರಿಯೆ ನಿರ್ವಹಿಸಿದ್ದಾರೆ.
ಪುನಃ ದಿನಾಂಕ 15-08-2026 ರಂದು ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ವಿವಿಧ ತಾಲೂಕುಗಳಿಗೆ ಸಂಚರಿಸಿ, ಜಿಲ್ಲೆಯ ಮಾನ್ಯ ಉಸ್ತುವಾರಿ ಸಚಿವರು, ಮಾನ್ಯ ಶಾಸಕರು, ಹಿರಿಯ ಮುಖಂಡರು ಹಾಗೂ ಪ್ರಮುಖ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳಲ್ಲಿ ಇಲ್ಲಿಯವರೆಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತ ಮುಸ್ಲಿಂ ಬಾಂಧವರಿಗೆ ದೊರಕಿಲ್ಲ ಎನ್ನುವ ವಿಷಯ ಸಹ ಗಮನಕ್ಕೆ ಬಂದಿದ್ದು, ಹಲವಾರು ಮುಖಂಡರು ಸಹ ಅಲ್ಪಸಂಖ್ಯಾತ ಮುಸ್ಲಿಂ ಸಮಾಜಕ್ಕೆ ನೀಡಬೇಕು ಎಂಬ ಭಾವನೆ ವ್ಯಕ್ತವಾಗಿದೆ. ಈ ವಿಷಯದ ಬಗ್ಗೆ ಸ್ವತಃ ಯಾದವ್ ಸಹ ಅವರಿಗೆ ಮನವರಿಕೆಯಾಗಿದೆ ಎನ್ನಲಾಗಿದೆ.

ಕಾಮೆಂಟ್ ಪೋಸ್ಟ್ ಮಾಡಿ