Top News

ಮಕ್ಕಳ ಜೀವನದ ಜೊತೆ ಚೆಲ್ಲಾಟ, ಡಿಡಿಪಿಐನಿಂದ ದಿನಕ್ಕೊಂದು ಆದೇಶ, ಶಿಕ್ಷಣ ಇಲಾಖೆಯಲ್ಲೇನಿದು ಹುಚ್ಚಾಟ?

ವಿಜಯಪುರ: ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣದಲ್ಲಾದ ಹಗರಣದಿಂದಾಗಿ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಇದೀಗ ಪ್ರಭಾರ ಡಿಡಿಪಿಐ ಕೂಡ ಭಾರವಾಗಿದ್ದು, ದಿನಕ್ಕೊಂದು ಆದೇಶ ಹೊರಡಿಸುವ ಮೂಲಕ ಮಕ್ಕಳ ಜೀವದ ಜೊತೆ ಚೆಲ್ಲಾಟಕ್ಕಿಳಿದಿದ್ದಾರೆ.

ಹೌದು, ಡಿಡಿಪಿಐ ವೀರಯ್ಯ ಸಾಲಿಮಠ ವರ್ಗಾವಣೆ ಬಳಿಕ ಪ್ರಭಾರ ಹುದ್ದೆ ಅಲಂಕರಿಸಿರುವ ಮಂಜುನಾಥ ಗುಳೇದಗುಡ್ಡ ಮನಸೋ ಇಚ್ಛೆ ಆಡಳಿತ ನಡೆಸಲಾರಂಭಿಸಿದ್ದಾರೆ. ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರ ನೇಮಕ ವಿಚಾರದಲ್ಲಿ ಡಿಡಿಪಿಐ ನಡೆದುಕೊಳ್ಳುತ್ತಿರುವ ರೀತಿ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. 

2026ರ ಮೇ 21 ರಂದು ಹಿರಿಯ ಸಹ ಶಿಕ್ಷಕ ಬಿ.ಆರ್. ಚವಾಣ್ ಎಂಬುವರನ್ನು ಜೇಷ್ಠತೆಯ ಆಧಾರದ ಮೇಲೆ ಮತ್ತು ಇವರು ಅಂಗವಿಕಲರಾದ ಹಿನ್ನೆಲೆ ಪ್ರಭಾರ ಹುದ್ದೆ ಅಲಂಕರಿಸಲು ಇಂಡಿ ಬಿಇಒಗೆ ಆದೇಶ ಹೊರಡಿಸಿದ್ದಾರೆ. ಆ ಪ್ರಕಾರ ಬಿ.ಆರ್. ಚವಾಣ್ ಕೂಡ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆದರೆ, ಅದೇ ಶಾಲೆಯ ಕಿರಿಯ ಶಿಕ್ಷಕ ಆನಂದ ಕೆಂಭಾವಿ ಜವಾಬ್ದಾರಿ ನೀಡದೇ ಅಂಗವಿಕಲನಾಗಿರುವ ಮತ್ತು ಜೇಷ್ಠತೆಯ ಆಧಾರದ ಮೇಲೆ ಹಿರಿಯರಾದ ಬಿ.ಆರ್. ಚವಾಣ್ ಅವರಿಗೆ ಸಾಕಷ್ಟು ಸತಾಯಿಸಿದ್ದಾರೆ.

 ಹಲವು ದಿನಗಳಿಂದ ಸ್ವಂತ ಹಣ ಖರ್ಚು ಮಾಡಿ ಬಿಸಿಯೂಟದ ಬೇಕಾದ ಸಾಮಾಗ್ರಿಯನ್ನು ಪೂರೈಸುತ್ತಿರುವ ಅಂಗವಿಕಲ ಶಿಕ್ಷಕ ಚವಾಣ್ ಹಿರಿಯ ಅಧಿಕಾರಿಗಳ ಮುಂದೆ ಸಾಕಷ್ಟು ಅಲವತ್ತುಕೊಂಡರೂ ಕ್ಯಾರೆ ಎಂದಿಲ್ಲ.

ಇದೀಗ ಕಿರಿಯ ಶಿಕ್ಷಕ ಆನಂದ ಕೆಂಭಾವಿಯ ಲಾಬಿಯ ಕಾರಣಕ್ಕೋ ಅಥವಾ ಲಂಚದ ಆಮಿಷಕ್ಕೋ ಅಥವಾ ದುರುದ್ಧೇಶದಿಂದಲೋ ಡಿಡಿಪಿಐ ಗುಳೇದಗುಡ್ಡ ಜು.20ರಂದು ಗೊರನಾಳದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶ್ರೀನಿವಾಸ ಜಮಾದಾರ ಎಂಬುವರಿಗೆ ಪ್ರಭಾರ ಹುದ್ದೆ ನೀಡಿ ಆದೇಶಿಸಿದ್ದಾರೆ.

ವಿಚಿತ್ರವೆಂದರೆ ಆದೇಶದಲ್ಲಿ ಅಂಗವಿಕಲ ಶಿಕ್ಷಕ ಬಿ.ಆರ್. ಚವಾಣ್ ಇವರ ಮೇಲೆ ಅನಾಧಾರವಾಗಿ ಆರೋಪ ಹೊರಿಸಿರುವುದು ಬೆಳಕಿಗೆ ಬಂದಿದೆ. ಆದೇಶದಲ್ಲಿ ‘ಬಿ.ಆರ್.ಚವಾಣ್ ಸರಿಯಾಗಿ ಕೆಲಸ ನಿರ್ವಹಿಸದೇ ಇರುವುದರಿಂದ ಹಾಗೂ ಸದರಿಯವರಿಗೆ ನೀಡಿರುವ ಚಾರ್ಜ್ ನ್ಯಾಯ ಸಮ್ಮತವಾಗಿರದೇ ಇರುವುದಾಗಿ’ ಉಲ್ಲೇಖಿಸಿದ್ದಾರೆ. ಹಾಗಾದರೆ ಬಿ.ಆರ್. ಚವಾಣ್ ಅವರಿಗೆ ನ್ಯಾಯ ಸಮ್ಮತವಾಗಿರದ ಆದೇಶ ನೀಡಿದವರು ಯಾರು? ಚಾರ್ಜ್ ಕೊಡುವಾಗ ನ್ಯಾಯ ಸಮ್ಮತವಾಗಿತ್ತೇ? ಈಗ ಏಕಾಏಕಿ ನ್ಯಾಯ ಸಮ್ಮತವಾಗಿರದೇ ಇರಲು ಕಾರಣವೇನು? ಎಂಬ ಪ್ರಶ್ನೆ ಕಾಡುತ್ತಿದೆ.

ಕೂಡಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರು, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜಿಲ್ಲಾಧಿಕಾರಿಗಳು ಈ ಕುರಿತು ಗಮನ ಹರಿಸಿ ಅಂಗವಿಕಲ ಶಿಕ್ಷಕನಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕೆಂಬ ಒತ್ತಾಯ ಬಲಗೊಂಡಿದೆ.

Post a Comment

ನವೀನ ಹಳೆಯದು