Top News

ಗುರುವಿನ ದಾರಿ ಅನುಸರಿಸುವರೇ ಡಿ.ಕೆ.ಶಿವಕುಮಾರ್....?

ಬೆಂಗಳೂರು : ಐಟಿ ಲೋಕ ಬೆಂಗಳೂರಿನಲ್ಲಿ ತಲೆ ಎತ್ತುವಂತೆ ಮಾಡಿ ಸಿಲಿಕ್ಯಾನ್ ವ್ಯಾಲಿ ಆಗಿಸುವಂತೆ ಮಾಡಿದ ನಾಡಿನ ಮಾಜಿ ಮುಖ್ಯಮಂತ್ರಿ ದಿ.ಎಸ್.ಎಂ. ಕೃಷ್ಣ ಈಗಿನ ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಗುರು.

ಐಟಿ ವಲಯದಲ್ಲಿ ಕ್ರಾಂತಿ ಮಾಡಿದಂತೆ ರಾಜಕೀಯ ವಲಯದಲ್ಲಿಯೂ ಎಸ್.ಎಂ.ಕೃಷ್ಣ ತಮ್ಮದೇ ಆದ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ಮನೆ ಮಾತಾಗಿದ್ದರು.

ಮುಸ್ಲಿಂ ಮಹಿಳೆಗೆ ಸಚಿವ ಸ್ಥಾನ ನೀಡುವ ಮೂಲಕ ದಕ್ಷಿಣ ಭಾರತದಲ್ಲಿ ಮುಸ್ಲಿಂ ಮಹಿಳೆ ಸಚಿವ ಸ್ಥಾನವನ್ನು ಅಲಂಕರಿಸುವಂತೆ ಮಾಡಿದ ರೂವಾರಿಯೂ ಸಹ ಎಸ್.ಎಂ. ಕೃಷ್ಣ ಅವರೇ.

ಮಹಿಳೆಯರಿಗೆ ಮಹಿಳಾ ಮತ್ತು ಕುಟುಂಬ ಕಲ್ಯಾಣ ಖಾತೆಯೇ ಖಾಯಂ ಎನ್ನುವ ಕಾಲಘಟ್ಟದಲ್ಲಿ ಅದರಲ್ಲೂ ಅಲ್ಪಸಂಖ್ಯಾತ ಮಹಿಳಾ ಶಾಸಕಿ ನಫೀಜಾ ಫಜಲ್ ಅವರಿಗೆ ವೈದ್ಯಕೀಯ ಶಿಕ್ಷಣದಂತಹ ಖಾತೆ ನೀಡುವ ಮೂಲಕ ಅಲ್ಪಸಂಖ್ಯಾತ ಮಹಿಳಾ ಸಬಲೀಕರಣ ಹಾಗೂ ರಾಜಕೀಯ ಪ್ರಾತಿನಿಧ್ಯಕ್ಕೆ ಶ್ರೀಕಾರ ಬರೆದರು. 

1991 ರ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣ ಖಾತೆ, ನಂತರ ಸಚಿವ ಸಂಪುಟ ವಿಸ್ತರಣೆ ಬಳಿಕ 2001-2004 ರವರೆಗೆ ಐಟಿ ಬಿಟಿ ಖಾತೆ ನೀಡಿದರು.

ಆದರೆ 2004 ರಿಂದ ಇಲ್ಲಿಯವರೆಗೂ ಅಲ್ಪಸಂಖ್ಯಾತ ಮಹಿಳಾ ಶಾಸಕಿ ಸಚಿವೆಯಾಗಿಲ್ಲ. ಹೀಗಾಗಿ ತಮ್ಮ ರಾಜಕೀಯ ಗುರು ಇರಿಸಿದ್ದ ಮಹತ್ವದ ಹೆಜ್ಜೆಯನ್ನು ಡಿ.ಕೆ. ಶಿವಕುಮಾರ್ ಇರಿಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ಪ್ರತಿ ಹಂತದಲ್ಲೂ ಗುರುವನ್ನು ಆರಾಧಿಸುವ ಡಿ.ಕೆ. ಶಿವಕುಮಾರ್ ಈ ಸೂತ್ರವನ್ನು ಸಹ ಅನುಸರಿಸಿ ಹೊಸ ಭಾಷ್ಯ ಬರೆಯಲಿದ್ದಾರೆಯೇ? 

ಮುಸ್ಲಿಂ ಮಹಿಳಾ ಸಚಿವೆಯೇ ಇಲ್ಲ....

ಪ್ರಸ್ತುತ ರಾಜಕೀಯ ವಿದ್ಯಮಾನದಲ್ಲಿ ಯಾವೊಂದು ರಾಜ್ಯದಲ್ಲಿಯೂ ಮಹಿಳಾ‌ ಮುಸ್ಲಿಂ ಸಚಿವೆ ಇಲ್ಲವೇ ಇಲ್ಲ. ಎಸ್.ಎಂ. ಕೃಷ್ಣಾ ಸೃಜಿಸಿದ ಇತಿಹಾಸದ ನಂತರವೂ ಎಲ್ಲಿಯೂ ನಂತರ ಮುಸ್ಲಿಂ‌ ಮಹಿಳೆ ಶಾಸಕಿಯಾಗಿ ಆಯ್ಕೆಯಾಗಿಲ್ಲ.

ಒಂದು ವೇಳೆ ಈ ಬಾರಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಮುಸ್ಲಿಂ ಮಹಿಳಾ ಶಾಸಕಿಯರಿಗೆ ಸಚಿವ ಸ್ಥಾನ ನೀಡಿದರೆ ಹೊಸ ಇತಿಹಾಸ ಬರೆಯಬಹುದು. ಇಡೀ ದೇಶದಲ್ಲಿಯೇ ಹೊಸ ಸಂಚಲನ ಸೃಜಿಸಿ ಮಹಿಳಾ ಪ್ರಾತಿನಿಧ್ಯದ ಪ್ರತಿಧ್ವನಿ ಸಾರಬಹುದು, ಮಹಿಳಾ ಮೀಸಲಾತಿ ಮಸೂದೆ ವಿರೋಧಿ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಸಹ ಇದೊಂದು ಅವಕಾಶ.

ಇಬ್ಬರು ಶಾಸಕಿಯರ ಬಲ

ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಇಬ್ಬರು ಶಾಸಕಿಯರ ಬಲವಿದೆ. ಓರ್ವರು ಮೇಲ್ಮನೆಯಲ್ಲಿದ್ದರೆ, ಇನ್ನೋರ್ವರು ಕೆಳಮನೆಯಲ್ಲಿ. ಕಲಬುರ್ಗಿ ಶಾಸಕಿ ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು.

ಮೊದಲಿಗೆ ಕನೀಸ್ ಫಾತಿಮಾ‌ ಅವರು ಮಾಜಿ ಸಚಿವ ದಿ.ಖಮರುಲ್ ಇಸ್ಲಾಂ ಅವರ ಧರ್ಮಪತ್ನಿ. ರಾಜಕಾರಣವನ್ನು ಹತ್ತಿರದಿಂದ ನೋಡಿದವರು. ಸಾತ್ವಿಕತೆ, ಸರಳತೆಯ ಸ್ವಭಾವದಿಂದಲೇ ಆಡಳಿತ ಯಂತ್ರವನ್ನು ಅಷ್ಟೇ ಸಮರ್ಥವಾಗಿ ಮುನ್ನೆಡಿಸುತ್ತಿದ್ದಾರೆ, ಎರಡು ಬಾರಿ ಶಾಸಕಿಯಾದ ಅನುಭವವಿದೆ. ಹೀಗಾಗಿ ಸಚಿವೆಯಾಗುವ ನಿಟ್ಟಿನಲ್ಲಿ ಅವರು ದಾಪುಗಾಲು ಇರಿಸಿದ್ದೂ ಇದೆ.

ಇನ್ನೂ ವಿಧಾನ ಪರಿಷತ್ ಸದಸ್ಯೆಯಾಗಿರುವ ಬಲ್ಕೀಷ್ ಬಾನು ಶಿವಮೊಗ್ಗೆ ನೆಲದ ನಾಯಕಿ. ಜಿಲ್ಲಾ ಪಂಚಾಯತ ಅಧ್ಯಕ್ಷೆಯಾಗಿ ಜಿಲ್ಲೆಯಲ್ಲಿ ಹೊಸ ಛಾಪು‌ ಮೂಡಿಸಿ, ಖಡಕ್ ಆಗಿ ಕೆಡಿಪಿ ಸಭೆ ನಡೆಸಿ ಮನೆ ಮಾತಾಗಿದ್ದು, ಇಂದಿಗೂ ಜನರು ಅವರನ್ನು ಪ್ರೆಸಿಡೆಂಟ್ ಬಲ್ಕೀಷ್ ಎಂಬ ಉಪನಾಮದಿಂದಲೇ ಕರೆಯುತ್ತಾರೆ ಎಂದರೆ ಆ ಸ್ಥಾನಕ್ಕೆ ನ್ಯಾಯ ಒದಗಿಸಿದ್ದರು ಎಂಬುದೇ ಅರ್ಥ. ಈಗ ಚಿಂತಕರ ಚಾವಡಿಯಲ್ಲಿ ಅರ್ಥಗರ್ಭಿತ ಚರ್ಚೆ ನಡೆದಾಗ ಬಲ್ಕೀಷ್ ಬಾನು ಸದಾ ಜನಪರ, ಮಹಿಳಾ ಪರ ಧ್ವನಿಯಾಗುವುದುಂಟು. ಜನರ ಪರವಾಗಿ ವಕಾಲತ್ತು ವಹಿಸುವುದುಂಟು. ಹೀಗಾಗಿ ಅವರು ಸಚಿವ ಸ್ಥಾನದ ರೇಸದ ನಲ್ಲಿದ್ದಾರೆ.

ಒಟ್ಟಾರೆ ಈ ಬಾರಿ ಡಿ.ಕೆ. ಶಿವಕುಮಾರ್ ತಮ್ಮ ಸಂಪುಟದಲ್ಲಿ ಮಹಿಳೆಗೆ ಪ್ರಾತಿನಿಧ್ಯ ದೊರಕಿಸಿದರೆ ತಮ್ಮ ಗುರುವಿನ ಸೂತ್ರ ಪಾಲಿಸಿದಂತಾಗುವುದರಲ್ಲಿ ಎರಡು ಮಾತಿಲ್ಲ.

Post a Comment

ನವೀನ ಹಳೆಯದು