Top News

ಗುಂಟಾ ಪ್ಲಾಟ್‌ಗಳಿಗೆ ವಿದ್ಯುತ್ ಮೀಟರ್ ನೀಡದ ಸರ್ಕಾರದ ಕ್ರಮ ಖಂಡನೀಯ: ಅಪ್ಪುರಾಜ್ ನಿಮಾದಾರ


ವಿಜಯಪುರ: ಕರ್ನಾಟಕ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಗುಂಟಾ ಪ್ಲಾಟ್‌ಗಳಿಗೆ ವಿದ್ಯುತ್ ಮೀಟರ್‌ಗಳನ್ನು ನೀಡದೇ ಇರುವ ಸರ್ಕಾರದ ನೀತಿಯನ್ನು ಭೀಮ್ ರಾಜ್ಯ ದಲಿತ ಸೇವಾ ಸಮಿತಿ (ರಿ) ರಾಜ್ಯಾಧ್ಯಕ್ಷ ಅಪ್ಪುರಾಜ್ ನಿಮಾದಾರ ತೀವ್ರವಾಗಿ ಖಂಡಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರು ತಮ್ಮ ಜೀವನಪೂರ್ತಿ ದುಡಿದು ಖರೀದಿಸಿರುವ ಸಣ್ಣ-ಸಣ್ಣ ಗುಂಟಾ ಪ್ಲಾಟ್‌ಗಳಲ್ಲಿ ಮನೆ ನಿರ್ಮಿಸಿ ವಾಸಿಸಲು ಮುಂದಾಗಿದ್ದಾರೆ. ಆದರೆ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದರೂ ಮೀಟರ್ ನೀಡದೇ ಅಧಿಕಾರಿಗಳು ಹಾಗೂ ಸರ್ಕಾರ ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಅವರು ಆರೋಪಿಸಿದರು.

ವಿದ್ಯುತ್ ಎಂಬುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಅಗತ್ಯವಾಗಿದ್ದು, ಗುಂಟಾ ಪ್ಲಾಟ್ ಹೊಂದಿರುವವರಿಗೆ ಮೀಟರ್ ನಿರಾಕರಿಸುವುದು ಅನ್ಯಾಯವಾಗಿದೆ. ಇದರಿಂದ ಸಾವಿರಾರು ಕುಟುಂಬಗಳು ಕತ್ತಲೆಯಲ್ಲೇ ಜೀವನ ಸಾಗಿಸುವಂತಾಗಿದೆ. ಮಕ್ಕಳು ಶಿಕ್ಷಣ, ಮಹಿಳೆಯರು ಮತ್ತು ವೃದ್ಧರು ದಿನನಿತ್ಯದ ಅಗತ್ಯ ಕಾರ್ಯಗಳಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಸರ್ಕಾರ ಹಾಗೂ ವಿದ್ಯುತ್ ಸರಬರಾಜು ಸಂಸ್ಥೆಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಗುಂಟಾ ಪ್ಲಾಟ್‌ಗಳಿಗೆ ವಿದ್ಯುತ್ ಮೀಟರ್ ನೀಡುವ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ರೂಪಿಸುವ ಅನಿವಾರ್ಯತೆ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಭೀಮ್ ರಾಜ್ಯ ದಲಿತ ಸೇವಾ ಸಮಿತಿ (ರಿ) ರಾಜ್ಯದ ಜನರ ಪರವಾಗಿ ಈ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದು, ಶೀಘ್ರದಲ್ಲೇ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದೆ.


Post a Comment

ನವೀನ ಹಳೆಯದು