ವಿಜಯಪುರ: ಬರದ ನಾಡು ಎಂಬ ಹಣೆಪಟ್ಟಿ ಅಂಟಿಕೊಂಡಿದ್ದ ವಿಜಯಪುರ ಜಿಲ್ಲೆಯಲ್ಲಿ ಹೆಸರಾಂತ ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದ ಕಂಪನಿಗಳು ಹೂಡಿಕೆ ಮಾಡಲು ಆಸಕ್ತಿ ತೋರಿದ್ದು, ಈ ಭಾಗದಲ್ಲಿ ವಿವಿಧ ಕಾರ್ಖಾನೆ ಕಂಪನಿಗಳ ಸ್ಥಾಪನೆಯಿಂದ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗುವುದಲ್ಲದೇ, ಭವಿಷ್ಯದಲ್ಲಿ ವಿಜಯಪುರ ಜಿಲ್ಲೆಯ ಮ್ಯಾನುಫ್ಯಾಕ್ಚರ್ ಕ್ಲಸ್ಟರ್‍ವಾಗಿ ರೂಪಗೊಳ್ಳಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಸೋಮವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ,ನಂತರ ಧ್ವಜವಂದನೆ ಸ್ವೀಕರಿಸಿ,ತೆರೆದ ವಾಹನದಲ್ಲಿ ಪೆರೇಡ್ ತಂಡಗಳ ಪರಿವೀಕ್ಷಣೆ ನಡೆಸಿ, ಗಣರಾಜ್ಯೋತ್ಸವ ಸಂದೇಶ ನೀಡಿದ ಅವರು, ಸ್ವಿಟ್ಜಲೆರ್ಂಡ್ ದೇಶದ ದಾವೋಸ್ ನಗರದಲ್ಲಿ ನಡೆದ ವಿಶ್ವ ಆರ್ಥಿಕ ಸಮಾವೇಶದಲ್ಲಿ ನಾನು ನೋಕಿಯಾ, ಟಾಟಾ ಸನ್ಸ್, ವಾಸ್ಟ್ ಸ್ಪೇಸ್ ಇನ್ನೂ ಮುಂತಾದ 50ಕ್ಕೂ ಹೆಚ್ಚು ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳ ಜೊತೆ ಬಂಡವಾಳ ಹೂಡಿಕೆ ಕುರಿತು ಮಾತುಕತೆ ನಡೆಸಿದ್ದೇನೆ. ಈ ಪೈಕಿ ಆರ್.ಪಿ-ಸಂಜೀವ್ ಗೊಯೆಂಕಾ ಕಂಪನಿಯು ಮರುಬಳಕೆ ಇಂಧನ ಕ್ಷೇತ್ರದಲ್ಲಿ ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆ ಮಾಡಲಿದೆ. ಇದರಿಂದ ಜಿಲ್ಲೆಯ ಯುವಜನರಿಗೆ ಇಲ್ಲೇ ಉಜ್ವಲ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ ಎಂದು ಅವರು ಹೇಳಿದರು.
ಕೆಲವು ತಿಂಗಳ ಹಿಂದೆ ಕೇಂದ್ರ ರಕ್ಷಣಾ ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ವಿಜಯಪುರ-ಬೆಳಗಾವಿ- ಧಾರವಾಡ ಜಿಲ್ಲೆಗಳನ್ನು ಒಳಗೊಂಡ ರಕ್ಷಣಾ ಕಾರಿಡಾರ್ ಮಂಜೂರು ಮಾಡುವಂತೆ ಮನವಿ ಮಾಡಿಕೊಂಡು, ಗಮನ ಸೆಳೆಯಲಾಗಿದೆ.ಉದ್ಘಾಟನೆಗೆ ಸಜ್ಜಾಗಿರುವ ವಿಜಯಪುರ ವಿಮಾನ ನಿಲ್ದಾಣವು ಮುಂದೆ ಇದರ ಲಾಭ ಪಡೆಯಲಿದೆ. ಇದರಿಂದ ಕಿತ್ತೂರು ಕರ್ನಾಟಕದ ಆರ್ಥಿಕ ಚಹರೆಯೇ ಬದಲಾಗಲಿದೆ. ನಾನಾ ಹೆಸರಾಂತ ಕಂಪನಿಗಳು ವಿಜಯಪುರ ಜಿಲ್ಲೆಯಲ್ಲಿ ಒಟ್ಟು 45 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದ್ದು, ಇದರಿಂದಾಗಿ ಜಿಲ್ಲೆಯು ಭವಿಷ್ಯದಲ್ಲಿ ಮ್ಯಾನ್ಯುಫ್ಯಾಕ್ಚರಿಂಗ್ ಕ್ಲಸ್ಟರ್ ಆಗಿ ರೂಪುಗೊಳ್ಳಲಿದೆ ಎಂದು ಅವರು ಹೇಳಿದರು.

ಕಾಮೆಂಟ್ ಪೋಸ್ಟ್ ಮಾಡಿ