ಹುಷಾರ್....ಆನ್‌ಲೈನ್ ವಂಚಕರಿದ್ದಾರೆ ಎಚ್ಚರ....!


 ಡಿಜಿಟಲ್ ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆಲ್ಲ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ !

ಪೊಲೀಸ್‌ರ ಕಾರ್ಯಾಚರಣೆ, ಜಾಗೃತಿ ಕಾರ್ಯಕ್ರಮಗಳ ಹೊರತಾಗಿಯೂ ಅನೇಕ ಮೋಸ ಹಾಗೂ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಸಾರ್ವಜನಿಕರ ನಿದ್ದೆಗೆಡಿಸುತ್ತಿವೆ. ಪ್ರಜ್ಞಾವಂತರೇ ಇಂಥದ್ದೊಂದು ವಂಚನೆ ಜಾಲಕ್ಕೆ ಸಿಲುಕುತ್ತಿರುವುದು ಇನ್ನಷ್ಟು ಸೋಜಿಗದ ಸಂಗತಿ. ಹೆಚ್ಚಿನ ಹಣದ ಆಸೆಗಾಗಿ ಆನ್‌ಲೈನ್ ಟ್ರೇಡಿಂಗ್ ಆ್ಯಪ್, ಫೇಸ್‌ಬುಕ್, ಟ್ವೀಟರ್ (ಎಕ್ಸ್) ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸದ ಕಾರಣ ಅನೇಕರು ಹಣ ಕಳೆದುಕೊಂಡು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ಅನಿವಾರ್ಯವಾಗಿರುವ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಜಾಗರೂಕತೆ ವಹಿಸುವ ಅವಶ್ಯಕತೆ ಇದೆ.

ಇಲ್ಲದೇ ಹೋದರೆ ಅನೇಕ ಜನರು ಈ ಸಾಮಾಜಿಕ ಜಾಲತಾಣದ ವಂಚನೆಗಳಿಗೆ ಬಲಿಯಾಗಿ ಕ್ಷಣಾರ್ಧದಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡಂತೆ ಹಣ ಕಳೆದುಕೊಳ್ಳಬೇಕಾಗುತ್ತದೆ. ವಾಮಮಾರ್ಗದಿಂದ ಹೆಚ್ಚಿನ ಹಣ ಗಳಿಸುವ ದುರುದ್ದೇಶದಿಂದ ಈ ಜಾಲ ಬೀಸುತ್ತಿರುವವರ ಬಗ್ಗೆ ಎಚ್ಚರ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಈಗಾಗಲೇ ಇಂಥ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಕಡಿಮೆ ಸಮಯದಲ್ಲಿ  ಹೆಚ್ಚಿನ ಹಣ ಗಳಿಸುವ ಆಮಿಷದಿಂದ ಮೋಬೈಲ್‌ಗಳಿಗೆ ಬರುವ ಲಿಂಕ್‌ಗಳ ಮೂಲಕ ಹಣ ವಿನಿಯೋಗಿಸಿ ಮೋಸ ಹೋಗಿರುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗಿ ಕಂಡು ಬರುತ್ತಿವೆ. ಇಂತಹ ಪ್ರಕರಣಗಳಿಗೆ ವಿಜಯಪುರ ಜಿಲ್ಲೆಯು ಹೊರತಾಗಿಲ್ಲ.

ಜಿಲ್ಲೆಯಲ್ಲಿ ಹೆಚ್ಚಿದ ಪ್ರಕರಣ:

ಜಿಲ್ಲೆಯಲ್ಲಿಯೂ ಇಂತಹ ಅನೇಕ ಪ್ರಕರಣಗಳು ಜರುಗಿದ್ದು, ಜಿಲ್ಲೆಯ ಸೈಬರ್ ಕ್ರೈಂ ಪೊಲೀಸರು ತಮ್ಮ ಚಾಣಾಕ್ಷತನದಿಂದ ಪ್ರಕರಣವನ್ನು ಭೇದಿಸಿ ಹಣ ಕಳೆದುಕೊಂಡ ದೂರುದಾರರಿಗೆ ಹಣ ಮರಳಿಸುವ ಮೂಲಕ ಸೈಬರ್ ಅಪರಾಧಿಗಳಿಗೆ ಎಚ್ಚರಿಕೆ-ಭಯ ಹುಟ್ಟಿಸುವುದರೊಂದಿಗೆ, ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತ ಜನರಲ್ಲಿ ಸುರಕ್ಷತೆಯ ಆಶ್ವಾಸನೆ ಭಾವ ಮೂಡಿಸಿದೆ. 

ಇತ್ತೀಚಿಗೆ ವಿಜಯಪುರ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಈ ಸೈಬರ್ ಪ್ರಕರಣಗಳ ಮಾಹಿತಿ ಒದಗಿಸಿ, ವಿಜಯಪುರ ನಗರದ ವ್ಯಾಪಾರಿಯೊಬ್ಬರು ಟ್ರೇಡಿಂಗ್ ಆ್ಯಪ್‌ನಲ್ಲಿ ಹೆಚ್ಚಿನ ಲಾಭಾಂಶಕ್ಕೆ ಮರುಳಾಗಿ ಹಂತ ಹಂತವಾಗಿ 2,04,71,500 ರೂ.ಗಳನ್ನು ವಿನಿಯೋಗಿಸಿ ಹಣ ಕಳೆದುಕೊಂಡಿದ್ದರು. ಪ್ರಕರಣವನ್ನು ಭೇಧಿಸಿ ಹಣ ಕಳೆದುಕೊಂಡ ವ್ಯಾಪಾರಿಗೆ 1,35,64,000 ರೂ.ಗಳನ್ನು ಮರಳಿಸಿದ್ದಾರೆ. ಅದರಂತೆ ಜಿಲ್ಲೆಯ ಇನ್ನೋರ್ವ ವ್ಯಾಪಾರಿಯೊಬ್ಬರು ಪ್ರಯಾಗರಾಜ್‌ದಿಂದ  ಕುಂಭಮೇಳಕ್ಕೆ ಹೆಲಿಕಾಪ್ಟರ್ ಮೂಲಕ ಹೋಗಲು ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಿ ಮೋಸಕ್ಕೊಳಗಾಗಿ 4,08,000 ರೂಗಳನ್ನು ಕಳೆದುಕೊಂಡಿದ್ದರು. ಹಾಗೆಯೇ ಜಿಲ್ಲೆಯ ಇನ್ನೋರ್ವ ವ್ಯಾಪಾರಿಯೊಬ್ಬರು ಇ-ಕಾಮ್ ಡೆಲಿವರಿ ಫ್ರಾಂಚೈಸಿ ಪಡೆಯಲು 58 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 22 ಲಕ್ಷ ರೂ.ಗಳನ್ನು ರಿಕವರಿ ಮಾಡಲಾಗಿದ್ದು, ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಹೀಗೆ ವಿವಿಧ 5 ಪ್ರಕರಣಗಳಿಗೆ ಸಂಬಂಧಿಸಿದಂತೆ ಈವರೆಗೆ ಜಿಲ್ಲೆಯ ಪೊಲೀಸರು ಒಟ್ಟು 1,32,38,183 ರೂ.ಗಳನ್ನು ರಿಕವರಿ ಮಾಡಿ, ದೂರುದಾರರಿಗೆ ಮರಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಮುನ್ನೆಚ್ಚರಿಕೆ ಅವಶ್ಯ:

ಇಂತಹ ಮೋಸ-ವಂಚನೆಗೊಳಗಾದವರು ಕೂಡಲೇ ಪ್ರಕರಣಗಳನ್ನು ದಾಖಲಿಸಲು ಮುಂದಾಗಬೇಕು. ಇದರಿಂದ ಇತರರು ಎಚ್ಚರಿಕೆಯಾಗಿ ಮೋಸ ಹೋಗುವುದನ್ನು ತಪ್ಪಿಸಬಹುದಾಗಿದೆ. ಆನ್‌ಲೈನ್ ವಂಚನೆಗಳಿಅದ ರಕ್ಷಣೆ ಪಡೆಯಲು ಕೆಲವು ಮುನ್ನೆಚ್ಚರಿಕೆ ಅಗತ್ಯ. ಯಾವುದೇ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಓಟಿಪಿ, ಪಿನ್, ಪಾಸ್‌ವರ್ಡ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಬ್ಯಾಂಕ್ ಅಥವಾ ಸರ್ಕಾರ ಎಂದೂ ಫೋನ್ ಮೂಲಕ ರಹಸ್ಯ ಮಾಹಿತಿಯನ್ನು ಕೇಳುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಅನುಮಾನಾಸ್ಪದ ಕರೆಗಳು ಅಥವಾ ಸಂದೇಶಗಳು ಬಂದರೆ ತಕ್ಷಣವೇ ನಿರ್ಲಕ್ಷಿಸಬೇಕು.

ವಂಚನೆಗೆ ಒಳಗಾದರೆ ತಡಮಾಡದೇ  ಹೆಲ್ಪ್‌ಲೈನ್‌ಗೆ ಕರೆ ಮಾಡಬೇಕು. ದೂರು ದಾಖಲಿಸಬೇಕು. ಸಮಯಕ್ಕೆ ಸರಿಯಾಗಿ ದೂರು ನೀಡಿದರೆ ಹಣ ಮರಳಿ ಪಡೆಯುವ ಸಾಧ್ಯತೆ ಇರುತ್ತದೆ. ಆನ್‌ಲೈನ್ ಸೌಲಭ್ಯಗಳನ್ನು ಬಳಸುವುದು ಅಗತ್ಯವಾದರೂ, ಜಾಗ್ರತೆ ಇನ್ನಷ್ಟು ಅಗತ್ಯ. ಸ್ವಲ್ಪ ಎಚ್ಚರಿಕೆ ಮತ್ತು ಅರಿವು ನಮ್ಮ ಹಣ ಮತ್ತು ಗೌಪ್ಯತೆಯನ್ನು ರಕ್ಷಿಸಬಹುದು. ಆದ್ದರಿಂದ ಪ್ರತಿಯೊಬ್ಬರೂ ಆನ್‌ಲೈನ್ ವಂಚಕರಿಂದ ಎಚ್ಚರಿಕೆ ಇರಲಿ

Post a Comment

ನವೀನ ಹಳೆಯದು