ವಿಜಯಪುರ : ರಾಜಕೀಯ ಕಾರಣಕ್ಕಾಗಿ ಸದಾ ಅಭಿವೃದ್ಧಿ ಹೀನ ರಾಜಕೀಯ ಮಾಡುವ ಬಿಜೆಪಿ ನಾಯಕರು ಪ್ರವಾಸಿಗರ ಸ್ವರ್ಗವಾದ ಪಾರಂಪರಿಕ ನಗರಿ ವಿಜಯಪುರ ನಗರದ ಅಭಿವೃದ್ಧಿಗೆ ಕೇಂದ್ರದಿಂದ ಅನುದಾನ ತರಲು ರಾಜಕೀಯ ಪೈಪೋಟಿ ನಡೆಸಿ, ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತ್ಯಜಿತ್ ಎಸ್ ಪಾಟೀಲ ಆಗ್ರಹಿಸಿದರು.
ನಗರದಲ್ಲಿ ಪಕ್ಷದ ಸಂಘಟನೆ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ ಅವರೊಂದಿಗೆ ವಿಶಗವಗುರು ಬಸವೇಶ್ವರ, ಡಾ.ಬಿ.ಆರ್. ಅಂಬೇಡ್ಕರ್, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಸೇರಿದಂತೆ ವಿವಿಧ ಮಹಾತ್ಮರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ನಗರದೇವತೆ ಶ್ರೀಸಿದ್ಧೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹಾಸಿಂಪೀರ ದರ್ಗಾ ದರ್ಶನ ಪಡೆದು ಮಾತನಾಡಿದರು.
ಪ್ರವಾಸಿಗರ ಸ್ವರ್ಗವಾಗಿರುವ ವಿಜಯಪುರ ಪಾರಂಪರಿಕ ಮಹಾನಗರದಲ್ಲಿ ಸ್ಥಳೀಯವಾಗಿ ಹತ್ತಾರು ಸಾವಿರ ಉದ್ಯೋಗ ಕಲ್ಪಿಸಿ, ನಿರುದ್ಯೋಗ ನಿವಾರಿಸಲು ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಲು ಪೈಪೋಟಿ ನಡೆಸಿ ಎಂದು ಬಿಜೆಪಿ ನಾಯಕರನ್ನು ಕುಟುಕಿದರು.
ವಿಜಯಪುರ ಮಹಾನಗರ ಗೋಲಗುಮ್ಮಟ, ಇಬ್ರಾಹಿಂ ರೋಜಾದಂಥ ವಿಶ್ವವಿಖ್ಯಾತ ನೂರಾರು ಸ್ಮಾರಕಗಳನ್ನು ಹೊಂದಿದ್ದು, ಜಗತ್ತಿನಲ್ಲೇ ಬಹುದೊಡ್ಡ ಪಾರಂಪರಿಕ ನಗರವಾಗಿದೆ. ಇಂಥ ಐತಿಹಾಸಿಕ ಶ್ರೀಮಂತಿಕೆಯ ಮಹಾನಗರದ ಸಮಗ್ರ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ವಿಶೇಷ ಅನುದಾನ ತನ್ನಿ ಎಂದು ಆಗ್ರಹಿಸಿದರು.
ಜಾಗತಿಕ ಮನ್ನಣೆಯ ಸ್ಮಾರಕಗಳ ವೀಕ್ಷಣೆಗಾಗಿ ವಿಜಯಪುರ ಪಾರಂಪರಿಕ ನಗರಕ್ಕೆ ನಿತ್ಯವೂ ಸಾವಿರಾರು ಜನರು ಪ್ರವಾಸಕ್ಕೆ ಆಗಮಿಸುತ್ತಾರೆ. ಆದರೆ ಕೇಂದ್ರ ಸರ್ಕಾರದ ಪುರಾತತ್ವ ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಯ ಈ ಸ್ಮಾರಕಗಳ ಸಂರಕ್ಷಣೆ, ಮೂಲಭೂತ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿಲ್ಲ. ಜಾಗತಿಕ ಮಟ್ಟದ ಪ್ರವಾಸಿಗರ ಆಕರ್ಷಣೆಗೆ, ನಗರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿಲ್ಲ ಎಂದು ದೂರಿದರು.
ಕೇಂದ್ರದಲ್ಲಿ ಕಳೆದ ಮೂರು ಅವಧಿಗೆ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ, ನಗರಾಭಿವೃದ್ಧಿ, ಪ್ರವಾಸೋದ್ಯಮ ಮಂತ್ರಾಲಯ ವಿಜಯಪುರ ಪಾರಂಪರಿಕ ನಗರವನ್ನು ಮಾದರಿ ನಗರವಾಗಿ ರೂಪಿಸಲು ವಿಶೇಷ ಗಮನ ಹರಿಸಿಲ್ಲ ಎಂದು ಕಿಡಿ ಕಾರಿದರು.
ಐತಿಹಾಸಿಕ ವಿಜಯಪುರ ಮಹಾನಗರ ಪ್ರವಾಸಿ ಸ್ನೇಹಿಯಾಗಿ ಅಭ್ಯುದಯ ಕಂಡಲ್ಲಿ ಸ್ಥಳೀಯವಾಗಿ ಹತ್ತಾರು ಸಾವಿರ ಯುವ ಜನರಿಗೆ ಪ್ರತ್ಯಕ್ಷ, ಪರೋಕ್ಷ ಉದ್ಯೋಗ ದೊರೆಯಲಿದೆ. ಇದರಿಂದ ವಿಜಯಪುರ ನಗರವೂ ದೇಶದಲ್ಲಿ ಗುರುತಿಸುವಂತಾಗುತ್ತದೆ. ಹೀಗಾಗಿ ಅಭಿವೃದ್ಧಿ ಮಾಡುವುದಕ್ಕೆ ಇಚ್ಛಾಶಕ್ತಿಯ ಪೈಪೋಟಿ ಮಾಡಿ ಎಂದು ಆಗ್ರಹಿಸಿದರು.


ಕಾಮೆಂಟ್ ಪೋಸ್ಟ್ ಮಾಡಿ