ವಿಜಯಪುರ : ರಾಜಸ್ಥಾನದ ಅಪ್ರಾಪ್ತ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಖಂಡಿಸಿ ಅಕ್ಕಮಹಾದೇವಿ ಮಹಿಳಾ ವಿವಿಯ ವಿದ್ಯಾರ್ಥಿನಿಯರು ಮಾನವ ಸರಪಳಿ ರಚಿಸಿ ತೀವ್ರವಾಗಿ ಖಂಡಿಸಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ವಿದ್ಯಾರ್ಥಿನಿ ಕ್ಷೇಮಪಾಲನಾ ನಿರ್ದೇಶನಾಲಯದ ಸಹಯೋಗದೊಂದಿಗೆ ಗುರುವಾರ ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ೧೩ ವರ್ಷದ ಅಪ್ರಾಪ್ತ ಬಾಲಕಿಯ ಅಪಹರಣ, ಮಾನವ ಕಳ್ಳಸಾಗಣೆ ಹಾಗೂ ಸಾಮೂಹಿಕ ಅತ್ಯಾಚಾರದ ಪ್ರಕರಣವನ್ನು ಖಂಡಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಕುಲಸಚಿವ ಶಂಕರಗೌಡ ಸೋಮನಾಳ, ಹೆಣ್ಣುಮಕ್ಕಳು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಹಾಗೂ ಅಮಾನವೀಯ ಕೃತ್ಯಗಳು ನಾಗರಿಕ ಸಮಾಜದ ಮೌಲ್ಯಗಳಿಗೆ ಕಳಂಕವಾಗಿವೆ. ಇಂತಹ ಪ್ರಕರಣಗಳನ್ನು ಕರ್ನಾಟಕ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾನಿಲಯ ತೀವ್ರವಾಗಿ ಖಂಡಿಸುತ್ತಿದ್ದು, ಸಂತ್ರಸ್ತೆಯರೊAದಿಗೆ ವಿಶ್ವವಿದ್ಯಾನಿಲಯ ಸದಾ ನೈತಿಕವಾಗಿ ನಿಲ್ಲಲಿದೆ ಎಂದರು.
ಇದೇ ಸಂದರ್ಭದಲ್ಲಿ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಹಾಗೂ ಮುಖ್ಯಸ್ಥೆ ಪ್ರೊ. ಲಕ್ಷ್ಮಿದೇವಿ ವಾಯ್ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಸಮಾಜ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಲಿಂಗತ್ವ ಸೂಕ್ಷö??ತೆಯ ಅರಿವು ಇಂದಿನ ತುರ್ತು ಅಗತ್ಯವಾಗಿದ್ದು, ಮಹಿಳೆಯನ್ನು ಗೌರವದಿಂದ ಕಾಣುವ ಹಾಗೂ ಆಕೆಯ ಸಬಲೀಕರಣಕ್ಕೆ ಸಮಾಜ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ವಿದ್ಯಾರ್ಥಿನಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ. ಜ್ಯೋತಿ ಉಪಾಧ್ಯೆ ಮಾತನಾಡಿ, ಮಕ್ಕಳಿಗೆ ಲಿಂಗತ್ವ ಸೂಕ್ಷö್ಮತೆ ಮೌಲ್ಯಗಳನ್ನು ಮನೆಯಲ್ಲಿಯೇ ಕಲಿಸಬೇಕು. ಸಮಾಜವೂ ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕು. ಮಹಿಳೆಯರ ವಿರುದ್ಧ ನಡೆಯುವ ಇಂತಹ ಹೀನ ಕೃತ್ಯಗಳನ್ನು ಪ್ರತಿಯೊಬ್ಬರೂ ವಿರೋಧಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಈ ವೇಳೆ ಘಟನೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗುವುದರೊಂದಿಗೆ ಸಹಿ ಸಂಗ್ರಹ ಅಭಿಯಾನವೂ ನಡೆಯಿತು. ಪ್ರತಿಭಟನೆಯಲ್ಲಿ ವಿಶ್ವವಿದ್ಯಾನಿಲಯದ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಮಹಿಳಾ ಅಧ್ಯಯನ ಕೇಂದ್ರದ ಸಿಬ್ಬಂದಿಗಳಾದ ಡಾ. ಭಾಗ್ಯಶ್ರೀ ದೊಡಮನಿ, ಡಾ. ಸರೋಜಾ ಸಂತಿ, ಡಾ. ಶಶಿಕಲಾ ರಾಠೋಡ, ಡಾ. ರಜಿಯಾ ನದಾಫ, ಅಂಬಿಕಾ ಮಾಲಗಾರ ಹಾಗೂ ಕಾವೇರಿ ಇಂಡಿಕರ ಉಪಸ್ಥಿತರಿದ್ದರು.

ಕಾಮೆಂಟ್ ಪೋಸ್ಟ್ ಮಾಡಿ