ಸಂತ್ರಸ್ತರ ಮಕ್ಕಳಿಗೆ ಶೇ.50 ಉದ್ಯೋಗ ಮೀಸಲಾಗಲಿ : ಸಚಿವ ಶಿವಾನಂದ

ಕೊಲ್ಹಾರ: ಎನ್.ಟಿ.ಪಿ.ಸಿ. ವಿದ್ಯುತ್ ಘಟಕ ಸ್ಥಾಪನೆಗೆ ಸಾವಿರಾರು ಎಕರೆ ಜಮೀನು ಕಳೆದುಕೊಂಡಿರುವ ಸಂತ್ರಸ್ತರ ಮಕ್ಕಳಿಗೆ ಇಲ್ಲಿ ಡಿ ದರ್ಜೆಯ ಶೇ.50 ರಷ್ಟು ಹುದ್ದೆ ಮೀಸಲಿಡಿ ಎಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.

ಶುಕ್ರವಾರ ಸಂಜೆ ಕೊಲ್ಹಾರ ತಾಲೂಕಿನ ಕೂಡಗಿ ಎನ್‍ಟಿಪಿಸಿ ಪರಿಸರದಲ್ಲಿ 2 ಕೋಟಿ ರೂ. ಅನುದಾನದಲ್ಲಿ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೂಡಗಿ ಎನ್.ಟಿ.ಪಿ.ಸಿ. ಘಟಕದಲ್ಲಿ ಸಂತ್ರಸ್ತರಿಗೆ ಉದ್ಯೋಗ ದೊರೆಯುವ ಬದಲು ಉತ್ತರ ಭಾರತ ಜನರಿಗೆ ಉದ್ಯೋಗ ಕಲ್ಪಿಸಲಾಗುತ್ತದೆ. ಇದರಿಂದ ಭರವಸೆ ಹೊಸಿಗೊಂಡಿದ್ದು, ಭವಿಷ್ಯದಲ್ಲಿ ಕನಿಷ್ಟ ಡಿ ದರ್ಜೆಯ ಹುದ್ದೆಗಳಲ್ಲಾದರೂ ಸಂತ್ರಸ್ತರ ಕುಟುಂಬದವರಿಗೆ ಉದ್ಯೋಗದ ನೇಮಕಾತಿಯಲ್ಲಿ ಮೀಸಲು ನೀಡಿ ಎಂದು ಎನ್.ಟಿ.ಪಿ.ಸಿ. ಅಧಿಕಾರಿಗಳಿಗೆ ಸಲಹೆ ನೀಡಿದರು.

ದಶಕದ ಹಿಂದೆ ಕೂಡಗಿ ಎನ್.ಟಿ.ಪಿ.ಸಿ ಸ್ಥಾಪನೆ ಹಂತದಲ್ಲಿ ನಡೆದ ಅಹಿತಕರ ಘಟನೆಯಿಂದ ಇಲ್ಲಿ ಪೊಲೀಸ್ ಠಾಣೆ ಸ್ಥಾಪನೆ ಮಾಡಲಾಗಿದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಸೈನಿಕರು ದೇಶದ ಗಡಿಯಲ್ಲಿ ಕಾಯ್ದರೆ, ರೈತರು ದೇಶಕ್ಕೆ ಅನ್ನ ನೀಡುತ್ತಾರೆ. ದೇಶದಲ್ಲಿ ಆಂತರಿಕ ಕಾನೂನು, ಸುವ್ಯವಸ್ಥೆ, ಶಾಂತಿ ಸ್ಥಾಪನೆಯಲ್ಲಿ ಪೊಲೀಸ್ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಬಣ್ಣಿಸಿದರು.

ಕೂಡಗಿ ಎನ್‍ಟಿಪಿಸಿ ನಿರ್ಮಾಣ ವಿರೋಧಿಸಿ ಹೋರಾಟ ನಡೆದಿತ್ತು. ಆ ನಡೆದಿದ್ದ ಅಹಿತಕರ ಘಟನೆಯನ್ನು ಅನುಲಕ್ಷಿಸಿ, ನಾನು ಈ ಭಾಗದಲ್ಲಿ ಶಾಸ್ವತವಾಗಿ ಶಾಂತಿ, ಸುವ್ಯವಸ್ಥೆ ಸ್ಥಾಪಿಸಲು ಪೊಲೀಸ್ ಠಾಣೆ ತೆರೆಯುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೆ ಎಂದರು.

ಘಟನಾ ಸ್ಥಳಕ್ಕೆ ಆಗಮಿಸಿದ್ದ ಅಂದು ಇಂಧನ ಸಚಿವರಾಗಿದ್ದ ಇಂದಿನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ವಿದ್ಯುತ್ ಉತ್ಪಾದಕ ಬೃಹತ್ ಕೈಗಾರಿಕೆ ಪರಿಸರದಲ್ಲಿ ಭವಿಷ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂರಕ್ಷಣೆಗಾಗಿ ಪೊಲೀಸ್ ಠಾಣೆ ಮಂಜೂರು ಮಾಡುವಂತೆ ನಾನು ಮನವಿ ಮಾಡಿದ್ದೆ ಎಂದು ಕೂಡಗಿ ಪೊಲೀಸ್ ಠಾಣೆ ಸ್ಥಾಪನೆ ಹಿನ್ನೆಲೆ ವಿವರಿಸಿದರು.

ನನ್ನ ಮನವಿ ಮೇರೆಗೆ ಸಭೆ ನಡೆಸಿದ್ದ ಶಿವಕುಮಾರ ಅವರು, ಸರ್ಕಾರ ಎನ್‍ಟಿಪಿಸಿ ಕೇಂದ್ರದ ಪರಿಸರದಲ್ಲಿ ಪೊಲೀಸ್ ಠಾಣೆ ಮಂಜೂರು ಮಾಡುವಲ್ಲಿ ಸಹಕಾರ ನೀಡಿದ್ದರು. ಕೂಡಗಿ ಎನ್‍ಟಿಪಿಸಿ ನಿವೇಶನದಲ್ಲಿ ತಾತ್ಕಾಲಿಕ ಶೆಡ್‍ನಲ್ಲಿ ಇಬ್ಬರು ಪಿಎಸ್‍ಐ, ಇಬ್ಬರು ಎಎಸ್‍ಐ, 10 ಪೊಲೀಸ್ ಸಿಬ್ಬಂದಿ ಸಹಿತ ಈ ಠಾಣೆ ಕಾರ್ಯ ನಿರ್ವಹಿಸುತ್ತಿದೆ ಎಂದು ವಿವರಿಸಿದರು.

ಸದರಿ ಪೊಲೀಸ್ ಠಾಣೆ ಶಾಸ್ವತ ಕಟ್ಟಡ ನಿರ್ಮಾಣಕ್ಕೆ 18 ಗುಂಟೆ ನಿವೇಶನ ನೀಡಿದ್ದು, 2 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಸದರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೂಡಗಿ ಟಾನ್‍ಶಿಪ್ ಮಾತ್ರವಲ್ಲದೇ 9 ಹಳ್ಳಿಗಳು, 2 ತಾಂಡಾಗಳ ವ್ಯಾಪ್ತಿ ಹೊಂದಿದೆ ಎಂದು ವಿವರಿಸಿದರು.

ಸರ್ಕಾರದ ಮಂಜೂರಾತಿ ಬಳಿಕ 2019 ಮಾರ್ಚ 25 ರಂದು ತಾತ್ಕಾಲಿಕ ಶೆಡ್‍ನಲ್ಲಿ ಕೂಡಗಿ ಪೊಲೀಸ್ ಠಾಣೆ ತಲೆ ಎತ್ತಿದ್ದು, ಇದೀಗ ಶಾಸ್ವತ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿದೆ ಎಂದರು.

ಎನ್‍ಟಿಪಿಸಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಿತ್ತಿಯಾನಂದ ಝಾ, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಬಸವನಬಾಗೇವಾಡಿ ಡಿಎಸ್ಪಿ ಬಲ್ಲಪ್ಪ ನಂದರೆಡ್ಡಿ, ಕೊಲ್ಹಾರ ತಹಸೀಲ್ದಾರ ನಾಯಕಲಮಠ, ಕೂಡಗಿ ಠಾಣೆ ಎಸ್‍ಐ ಯತೀಶ, ಕೂಡಗಿ ಗ್ರಾ.ಪಂ. ಅಧ್ಯಕ್ಷೆ ಹುಸೇನಬಿ ಮಾಶಾಳ, ಮೇಹರಾಜಪೀರ್ ಜಹಗೀರದಾರ, ಈಶ್ವರ ಜಾಧವ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಮಸೂತಿ ಗ್ರಾಮದ ಸಿ.ಪಿ.ಪಾಟೀಲ, ತಾನಾಜಿ ನಾಗರಾಳ, ತೆಲಗಿ ಗ್ರಾಮದ ಈರಣ್ಣ ಚಿಮ್ಮಲಗಿ, ಸಿ.ಎಂ.ಹಂಡಗಿ, ಗೊಳಸಂಗಿ ಗ್ರಾಮದ ಹುಚ್ಚಪ್ಪ ಕಮತಗಿ, ಬಂದೇನವಾಜ ದೋಲಜಿ, ಇತರರು ವೇದಿಕೆ ಮೇಲಿದ್ದರು.

ಕೂಡಗಿ ಮಾತ್ರವಲ್ಲದೇ ಕೂಡಗಿ ತಾಂಡಾ, ತೆಲಗಿ, ಮುತ್ತಗಿ, ಮಸೂತಿ, ತಳೇವಾಡ, ಗೊಳಸಂಗಿ, ಕೂಡಗಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಗಳ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Post a Comment

ನವೀನ ಹಳೆಯದು