ದೇಶ ರಕ್ಷಣೆ ನಮ್ಮ ಹೊಣೆ – ಕಾಡು ಬೆಳೆಸಿ ನಾಡು ಉಳಿಸಿ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ ಮ್ಯಾರಾಥಾನ್‍ಗೆ ಡಾ.ಮಹಾಂತೇಶ ಬಿರಾದಾರ ಚಾಲನೆ


ಸ್ವಚ್ಛ ಭಾರತ ಮಿಷನ್ 2.0 ಅಂಗವಾಗಿ ಘನತ್ಯಾಜ್ಯ ಕಸ ವಿಲೇವಾರಿ ಹಾಗೂ ನಗರ ಸ್ವಚ್ಛತೆ ಜಾಗೃತಿ ಮೂಡಿಸಲು ಮಹಾನಗರ ಪಾಲಿಕೆಯ ವತಿಯಿಂದ ಮ್ಯಾರಾಥಾನ್ ವೈಭವದಿಂದ ನಡೆಯಿತು.

ರವಿವಾರ ಮಹಾನಗರ ಪಾಲಿಕೆ ವತಿಯಿಂದ ದೇಶ ರಕ್ಷಣೆ ನಮ್ಮ ಹೊಣೆ – ಕಾಡು ಬೆಳೆಸಿ ನಾಡು ಉಳಿಸಿ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ ಮ್ಯಾರಾಥಾನ್ ಓಟಕ್ಕೆ ಮ್ಯಾರಾಥಾನ್ ಓಟಗಾರ ಮಹಾಂತೇಶ ಬಿರಾದಾರ ಅವರು ಚಾಲನೆ ನೀಡಿ ಮಾತನಾಡಿ, ಸ್ವಚ್ಚತೆ ನಮ್ಮ ಮೂಲಮಂತ್ರ, ಕಸ ವಿಲೇವಾರಿ ವ್ಯವಸ್ಥಿತವಾಗಿದ್ದರೆ ಇಡೀ ನಗರ ಸ್ವಚ್ಚ ಸುಂದರವಾಗಿ ಕಂಗೊಳಿಸುತ್ತದೆ, ಸೌಂದರ್ಯ ಹಾಗೂ ಆರೋಗ್ಯ ಎರಡು ಸಾಧ್ಯವಾಗುವುದು ನೈರ್ಮಲ್ಯದಿಂದಲೇ, ಹೀಗಾಗಿ ನೈರ್ಮಲ್ಯಕ್ಕೆ ನಾವು ಆದ್ಯತೆ ನೀಡಬೇಕು ಎಂದರು.

ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮಾತನಾಡಿ, ಸ್ವಚ್ಛ ವಿಜಯಪುರ ನಗರದ ಸಂಕಲ್ಪವನ್ನು ಮಾಡಲಾಗಿದ್ದು, ಸ್ವಚ್ಛತೆ ಜಾಗೃತಿಗಾಗಿ ಅನೇಕ ವಿಶಿಷ್ಟಪೂರ್ಣ ಕಾರ್ಯಕ್ರಮವನ್ನು ಪಾಲಿಕೆ ವತಿಯಿಂದ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ನೂರಾರು ಸಾರ್ವಜನಿಕರು, ವಿವಿಧ ಸಂಘಸಂಸ್ಥೆಗಳ ಪ್ರಮುಖರು, ಕ್ರೀಡಾಪಟುಗಳು, ಸೇನಾ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಪರೀಕ್ಷಾರ್ಥಿಗಳು, ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉತ್ಸಾಹದಿಂದ ಮ್ಯಾರಾಥಾನ್‍ನಲ್ಲಿ ಭಾಗವಹಿಸಿ ಸ್ವಚ್ಚತೆ ಸಂದೇಶ ಸಾರಿದರು.

ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡ ರ್ಯಾಲಿ ಗೋಲಗುಂಬಜ್, ಬಸವೇಶ್ವರ ವೃತ್ತ, ಗಾಂಧಿ ವೃತ್ತ, ಶಿವಾಜಿ ವೃತ್ತ, ವಾಟರ್ ಟ್ಯಾಂಕ್, ಇಬ್ರಾಹಿಂ ರೋಜಾ ಮಾರ್ಗವಾಗಿ ಸಂಚರಿಸಿ ಪುನ: ಡಾ.ಬಿ.ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣಕ್ಕೆ ತಲುಪಿ ಸಮಾವೇಶಗೊಂಡಿತು. 

ಮಹಾನಗರ ಪಾಲಿಕೆ ಮಹಾಪೌರ ಎಂ.ಎಸ್. ಕರಡಿ, ಸದಸ್ಯ ಅಶೋಕ ನ್ಯಾಮಗೌಡ, ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ವೈದ್ಯಾಧಿಕಾರಿ ಡಾ.ಎಸ್.ಎಲ್. ಲಕ್ಕಣ್ಣವರ, ಪಾಲಿಕೆ ನಾಮನಿರ್ದೇಶಿತ ಸದಸ್ಯ ಅಶ್ಪಾಕ್ ಮನಗೂಳಿ ಸೇರಿದಂತೆ ಇತರರು ಭಾಗವಹಿಸಿದ್ದರು.

 


Post a Comment

ನವೀನ ಹಳೆಯದು